ಜಾರ್ಖಂಡ್ | ಪೊಲೀಸ್ ನೇಮಕಾತಿ ಪರೀಕ್ಷೆ ವೇಳೆ 12 ಅಭ್ಯರ್ಥಿಗಳು ಸಾವು

ಜಾರ್ಖಂಡ್‌ ನಲ್ಲಿ ಈ ವರ್ಷದ ಅಬಕಾರಿ ಕಾನ್‌ಸ್ಟೇಬಲ್ ನೇಮಕಾತಿಯ ದೈಹಿಕ ಪರೀಕ್ಷೆಯ ವೇಳೆ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 

ಈ ಬಾರಿ ಅಬಕಾರಿ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯ ಮೌಲ್ಯಮಾಪನದಲ್ಲಿ ಬದಲಾವಣೆ ಮಾಡಲಾಗಿದೆ. ಅಭ್ಯರ್ಥಿಗಳು 1.6 ಕಿಮೀ ಬದಲಿಗೆ 10 ಕಿಮೀ ಓಡಬೇಕು. ಫಿಟ್ನೆಸ್ ಮಟ್ಟವನ್ನು ಮೌಲ್ಯಮಾಪನ ಮಾಡದಿರುವುದು, ಅತಿಯಾದ ಆರ್ದ್ರತೆ ಮತ್ತು ಲಿಖಿತ ಪರೀಕ್ಷೆಯ ಮೊದಲು ದೈಹಿಕ ಪರೀಕ್ಷೆಗಳನ್ನು ನಡೆಸುವ ನಿರ್ಧಾರದಿಂದ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ.

 

ಆಗಸ್ಟ್ 22 ರಿಂದ ಜಾರ್ಖಂಡ್ ಪೊಲೀಸರ ಮೇಲ್ವಿಚಾರಣೆಯಲ್ಲಿ ದೈಹಿಕ ಪರೀಕ್ಷೆ ಡ್ರೈವ್‌ನ ಮೊದಲ ಹಂತ ನಡೆಯುತ್ತಿದೆ. 60 ನಿಮಿಷಗಳಲ್ಲಿ ಓಟವನ್ನು ಪೂರ್ಣಗೊಳಿಸುವ ಅರ್ಹ ಅಭ್ಯರ್ಥಿಗಳು ನಂತರ ಲಿಖಿತ ಪರೀಕ್ಷೆ ಮತ್ತು ಅಂತಿಮ ವೈದ್ಯಕೀಯ ಪರೀಕ್ಷೆಗೆ ಒಳಗಾಗುತ್ತಾರೆ. ಪರೀಕ್ಷೆಗೆ ಕಡ್ಡಾಯವಾಗಿರುವ 10 ಕಿಮೀ ಓಟವನ್ನು ಓಡುವಾಗ 12 ಮಂದಿ ಸಾವನ್ನಪ್ಪಿದ್ದಾರೆ.

 

ಮೃತರನ್ನು 19 ರಿಂದ 31 ವರ್ಷ ವಯಸ್ಸಿನವರು ಎಂದು ಗುರುತಿಸಲಾಗಿದ್ದು, ಪಲಾಮು ಮೂಲದ ಅಮರೇಶ್ ಕುಮಾರ್, ಪ್ರದೀಪ್ ಕುಮಾರ್, ಅಜಯ್ ಮಹತೋ, ಅರುಣ್ ಕುಮಾರ್ ಮತ್ತು ದೀಪಕ್ ಕುಮಾರ್ ಪಾಂಡು, ಹಜಾರಿಬಾಗ್‌ನ ಮನೋಜ್ ಕುಮಾರ್ ಮತ್ತು ಸೂರಜ್ ಕುಮಾರ್ ವರ್ಮಾ, ಸಾಹಿಬ್‌ಗಂಜ್‌ನ ವಿಕಾಸ್ ಲಿಂಡಾ ಮತ್ತು ಗಿರಿದಿಹ್‌ನ ಸುಮಿತ್ ಯಾದವ್ ಸಾವನ್ನಪ್ಪಿದವರು. ಇನ್ನೂ ಮೂವರ ವಿವರಗಳನ್ನು ಇದುವರೆಗೂ ಬಹಿರಂಗಪಡಿಸಿಲ್ಲ.

 

ಸೆಪ್ಟೆಂಬರ್ 2ರವರೆಗೆ ಒಟ್ಟು 1.87 ಲಕ್ಷ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಿದ್ದು,ಅದರಲ್ಲಿ 1.17 ಲಕ್ಷ ಮಂದಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ.

 

ಸರ್ಕಾರಿ ಮೂಲಗಳ ಪ್ರಕಾರ, 2000ರಲ್ಲಿ ಜಾರ್ಖಂಡ್ ರಚನೆಯಾದ ನಂತರ ಇದೇ ಮೊದಲ ಬಾರಿಗೆ ಅಬಕಾರಿ ಕಾನ್‌ಸ್ಟೇಬಲ್ ನೇಮಕಾತಿ ಡ್ರೈವ್ ನಡೆಸಲಾಗಿದೆ. 2008 ಮತ್ತು 2019 ರಲ್ಲಿ ಪ್ರಯತ್ನಿಸಿದರೂ ಪೂರ್ಣಗೊಂಡಿರಲಿಲ್ಲ.

 

12 ಮಂದಿಯ ಸಾವಿನ ಹಿನ್ನೆಲೆ ನೇಮಕಾತಿ ಪರೀಕ್ಷೆಯನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ ಮತ್ತು ತನಿಖೆಗೆ ಸೂಚಿಸಲಾಗಿದೆ. ಸೆಪ್ಟೆಂಬರ್ 9ರಂದು ನೇಮಕಾತಿ ಡ್ರೈವ್ ಪುನರಾರಂಭವಾಗಲಿದೆ. ಆದರೆ, ಅಭ್ಯರ್ಥಿಗಳ ಸಾವಿನ ಕುರಿತು ಇನ್ನೂ ವರದಿ ಬಂದಿಲ್ಲ.

 

“ರಾಜ್ಯ ಸರ್ಕಾರವು ಕಾನೂನು ನಿಗದಿಪಡಿಸಿದ ಕಾರ್ಯವಿಧಾನದ ಪ್ರಕಾರ ಪರೀಕ್ಷೆ ನಡೆಸಿದೆ. ಹಲವು ಅಭ್ಯರ್ಥಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅದು ವಿವಿಧ ಕಾರಣಗಳಿಗೆ ಸಂಭವಿಸಿರಬಹುದು” ಎಂದು ಪೊಲೀಸರು ಸಮರ್ಥಿಸಿಕೊಂಡಿದ್ದಾರೆ.

 

ಇದನ್ನೂ ಓದಿ : ವಿವಾದಿತ ಅಧಿಕಾರಿ ಪೂಜಾ ಖೇಡ್ಕರ್‌ನ್ನು ಐಎಎಸ್‌ನಿಂದ ವಜಾಗೊಳಿಸಿದ ಕೇಂದ್ರ ಸರ್ಕಾರ

ವರದಿ ಸದಾನಂದ

error: Content is protected !!