ವಾಷಿಂಗ್ಟನ್: `ಮೋದಿ (Narendra Modi) ನನ್ನ ಸ್ನೇಹಿತ, ಭಾರತ (India) ಮಿತ್ರದೇಶ’ ಎಂದು ಹೊಗಳುತ್ತಲೇ ಬಂದಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಈಗ `ಭಾರತದ ಆರ್ಥಿಕತೆಯನ್ನು ಸತ್ತೋದ ಆರ್ಥಿಕತೆ’ (Dead Economies) ಅಂತ ನಿಕೃಷ್ಟ ಪದ ಬಳಸಿದ್ದಾರೆ.
ಭಾರತದ ಎಲ್ಲಾ ಆಮದು ವಸ್ತುಗಳ ಮೇಲೆ 25%ರಷ್ಟು ಸುಂಕ ಮತ್ತು ದಂಡ ವಿಧಿಸಿದ್ದರು. ಭಾರತವು ರಷ್ಯಾ ಜೊತೆ ತೈಲ, ಸೇನಾ ಸಾಮಗ್ರಿಗಳ ವ್ಯವಹಾರ ನಡೆಸ್ತಿದೆ ಎಂದು ಬುಧವಾರ ಟೀಕಿಸಿದ್ದರು. ಅದರ ಬೆನ್ನಲ್ಲೇ ರಷ್ಯಾ ಜೊತೆ ಭಾರತ ಏನು ಮಾಡುತ್ತೆ ಅನ್ನೋದು ನನಗೆ ಮುಖ್ಯ ಅಲ್ಲ. ಅದರ ಬಗ್ಗೆ ತಲೆಯನ್ನೂ ಕೆಡಿಸಿಕೊಳ್ಳಲ್ಲ. ಎರಡೂ ದೇಶಗಳು ತಮ್ಮ `ಸತ್ತ ಆರ್ಥಿಕತೆ’ಯನ್ನು ಒಟ್ಟಿಗೇ ನೆಲಕಚ್ಚಲಿ ಅಂತ ಶಾಪ ಹಾಕಿದ ರೀತಿ ವಿಶ್ವದ 3ನೇ ಅತಿದೊಡ್ಡ ಜಿಡಿಪಿ ದಾಖಲಿಸುವ ಸಮೀಪದಲ್ಲಿರುವ ಭಾರತದ ವಿರುದ್ಧ ಸೋಷಿಯಲ್ ಮೀಡಿಯಾ `ಟ್ರೂಥ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭಾರತದ ಜೊತೆ ನಾವು ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ. ಅವರು ವಿಧಿಸುವ ತೆರಿಗೆ ಬಹಳ ಅಧಿಕ. ವಿಶ್ವದಲ್ಲೇ ಅತ್ಯಧಿಕ ಸುಂಕ ವಿಧಿಸುವ ದೇಶಗಳಲ್ಲೊಂದಾಗಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ರಷ್ಯಾ – ಅಮೆರಿಕ ಮಧ್ಯೆ ಯಾವುದೇ ವ್ಯಾಪಾರ ಇಲ್ಲ. ಅದು ಹಾಗೇ ಇರಲಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಅಮೆರಿಕವು ಭಾರತಕ್ಕೆ ಬಹಳ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಅಮೆರಿಕಕ್ಕೆ ಭಾರತದ ಮಾರುಕಟ್ಟೆ ಪೂರ್ಣವಾಗಿ ಮುಕ್ತವಾಗಿಲ್ಲ. ಅಮೆರಿಕಕ್ಕೆ ಭಾರತದೊಂದಿಗೆ 40 ಬಿಲಿಯನ್ ಡಾಲರ್‌ಗೂ ಅಧಿಕ ಮೊತ್ತದಷ್ಟು ವ್ಯವಹಾರ ಕೊರತೆ ಇದೆ. ಇದರಿಂದ ಟ್ರಂಪ್ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ ಅಂತ ವಿಮರ್ಶಿಸಲಾಗ್ತಿದೆ.