ಕಾರಂಜಾ ಜಲಾಶಯದಿಂದ ಔರಾದ(ಬಿ) ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಕಾಮಗಾರಿ ಆರಂಭಿಸಲು ವಿಳಂಬವಾಗುತ್ತಿರುವುದಕ್ಕೆ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ಆಕ್ರೋಶಗೊಂಡಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಔರಾದ(ಬಿ) ಪಟ್ಟಣದಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಬೇಸಿಗೆ ಅವಧಿಯಲ್ಲಿ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಔರಾದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕೆಂಬ ಸಂಕಲ್ಪದೊಂದಿಗೆ ಹಲವು ವರ್ಷಗಳಿಂದ ಶ್ರಮಿಸುತ್ತಿದ್ದೇನೆ. ಹಿಂದೆ ಸಚಿವನಾಗಿದ್ದಾಗ ಬಸವರಾಜ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಅಮೃತ-2 ಯೋಜನೆಯಡಿ 84.82 ಕೋಟಿ ಅನುದಾನವನ್ನು ಮಂಜೂರು ಮಾಡಿಸಿದ್ದೇನೆ ಎಂದಿದ್ದಾರೆ.
ಈ ಯೋಜನೆಯಡಿ ಔರಾದ(ಬಿ) ಪಟ್ಟಣಕ್ಕೆ ಕಾರಂಜಾ ಜಲಾಶಯದಿಂದ ಪೈಪ್ಲೈನ್ ಮೂಲಕ ನೀರು ಸರಬರಾಜು ಮಾಡಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ನಂತರ ಔರಾದ(ಬಿ) ಪಟ್ಟಣದಲ್ಲಿ ನೀರಿನ ಸಮಸ್ಯೆ ಇರುವುದಿಲ್ಲ. ಹಾಗಾಗಿ ಕೆಲಸ ಶೀಘ್ರ ಆರಂಭಿಸಬೇಕೆಂದು ನಗರಾಭಿವೃದ್ಧಿ ಸಚಿವರು, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಹಿಂದೆ ಪತ್ರ ಬರೆಯಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗದ ಕಾರಣ ಮತ್ತೊಮ್ಮೆ ಮನವಿ ಪತ್ರಗಳನ್ನು ಸಲ್ಲಿಸಲಾಗಿದೆ ಎಂದಿದ್ದಾರೆ.
ಟೆಂಟರ್ ನಡೆದು ವರ್ಷಕ್ಕಿಂತ ಹೆಚ್ಚು ಸಮಯವಾದರೂ ಗುತ್ತಿಗೆದಾರರು ಇಂದಿಗೂ ಸ್ಥಳಕ್ಕೆ ಬಂದಿಲ್ಲ. ಕೆಲಸ ಆರಂಭಿಸಿಲ್ಲ. ಕೆಲಸ ಏಕೆ ಆರಂಭಿಸುತ್ತಿಲ್ಲ ? ಔರಾದ(ಬಿ)ಕ್ಷೇತ್ರದಲ್ಲಿ ಹೀಗೆ ಸಾಕಷ್ಟು ಕಾಮಗಾರಿಗಳು ಆರಂಭಗೊಂಡಿಲ್ಲ. ಔರಾದ(ಬಿ) ಕ್ಷೇತ್ರದ ಅಭಿವೃದ್ಧಿ ಕೆಲಸಗಳಿಂದ ಯಾರಿಗೆ ತೊಂದರೆಯಾಗುತ್ತಿದೆ ಎನ್ನುವುದು ಅರ್ಥವಾಗುತ್ತಿಲ್ಲ ಎಂದಿದ್ದಾರೆ.
ನಿಗದಿತ ಸಮಯಕ್ಕೆ ಕೆಲಸ ಆರಂಭಿಸದ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಜರುಗಬೇಕು. ಔರಾದ(ಬಿ) ಪಟ್ಟಣದ ಜನತೆಗೆ ಈ ಕಾಮಗಾರಿ ಅತ್ಯಂತ ಅವಶ್ಯಕವಾಗಿದ್ದು, ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಕಾಮಗಾರಿ ಶೀಘ್ರ ಆರಂಭವಾಗಬೇಕು ಎಂದು ಶಾಸಕ ಪ್ರಭು ಚವ್ಹಾಣ ಅವರು ಒತ್ತಾಯಿಸಿದ್ದಾರೆ.