ಬೆಂಗಳೂರು: ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿದಲ್ಲದೆ, ಕಾಂಪೌಂಡ್ ಕೆಡವಿ ಅಕ್ರಮವಾಗಿ ಶೆಡ್ ನಿರ್ಮಿಸಿದ ಆರೋಪದಡಿ ನಟ ಮಯೂರ್ ಪಟೇಲ್ ಸೇರಿ ಇತರರ ವಿರುದ್ಧ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್‌ಎಸ್‌ಆರ್ ಲೇಔಟ್‌ನ ಸೋಮ ಸುಂದ್ರಪಾಳ್ಯ ನಿವಾಸಿ ಶಾಲಿನಿ ಎಂಬುವರು ನೀಡಿದ ದೂರಿನ ಮೇರೆಗೆ ನಟ ಮಯೂರ್ ಪಟೇಲ್, ಎನ್.ಆರ್.ಭಟ್ಟ, ಸುಬ್ರಮಣ್ಯಂ ಸೇರಿ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದೂರಿನಲ್ಲಿ ಏನಿದೆ?: ದೂರುದಾರರಾದ ಶಾಲಿನಿ ನೀಡಿರುವ ದೂರಿನ ಅನ್ವಯ, ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿ ಹರಳಕುಂಟೆ ಗ್ರಾಮದ ಸರ್ವೆ ನಂಬರ್ 55/10ರಲ್ಲಿ 14 ಗುಂಟೆ ಜಮೀನು ನೋಂದಾಯಿತ ದಾನಪತ್ರದ ಮೂಲಕ ತನ್ನ ಪತಿ ಮಂಜುನಾಥ ರೆಡ್ಡಿಗೆ ಬಂದಿದೆ. ಈ ಜಮೀನಿನಲ್ಲಿ ಕಾಂಪೌಂಡ್ ಮತ್ತು ಖಾಲಿ ಜಾಗವಿದೆ. ಈ ಜಾಗದ ವಿಚಾರ ವಾಗಿ ಮಯೂರ್ ಪಟೇಲ್ ಮತ್ತು ಎನ್. ಆರ್.ಭಟ್ಟ ವಿರುದ್ಧ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ.
ನ್ಯಾಯಾಲಯವು ಸ್ವತ್ತಿನ ಯಥಾ ಸ್ಥಿತಿ ಕಾಯ್ದುಕೊಳ್ಳಬೇಕು. ಆದರೆ, ಆರೋಪಿಗಳು ನ್ಯಾಯಾಲಯದ ಆದೇಶ ಉಲ್ಲಂಘಿಸಿ, ಅ.18ರಂದು ಬೆಳಗ್ಗೆ ಸುಮಾರು 75 ಮಂದಿ ಅಪರಿಚಿತರೊಂದಿಗೆ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಜೆಸಿಬಿ ಮೂಲಕ ಕಾಂಪೌಂಡ್ ಉರುಳಿಸಿ, ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿದ್ದಾರೆ. ಈ ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.