ಅಮೇರಿಕಾದ ಬೆಂಬಲ ಇಲ್ಲದೇ ಇಸ್ರೇಲ್ ಯಾರೊಂದಿಗೂ ಹೋರಾಡಲು ಶಕ್ತವಿಲ್ಲ” – ಅಮೇರಿಕಾಕ್ಕೆ ಇಸ್ರೇಲ್ ಯಾಕೆ ಮುಖ್ಯ ಗೊತ್ತಾ?

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಕದನ ಇಡೀ ವಿಶ್ವದ ಮೇಲೆ ಭಾರೀ ಪರಿಣಾಮ ಬೀರುವ ಲಕ್ಷಣಗಳು ಕಾಣ ಸಿಗುತ್ತಿವೆ. ಇಸ್ರೇಲ್ ಅತಿಕ್ರಮಿಸಿರುವ ತಮ್ಮ ತಾಯಿ ನೆಲವನ್ನು ಬಿಟ್ಟು ಹೋಗಬೇಕೆಂದು ಪ್ಯಾಲೆಸ್ಟೈನ್ ನಾಗರಿಕರು ದಶಕಗಳಿಂದ ಆಗ್ರಹಿಸುತ್ತ ಬಂದಿದ್ದಾರೆ. ಈ ಕೂಗನ್ನು ದಮನಿಸಲು ಇಸ್ರೇಲ್ ನಿರಂತರವಾಗಿ ಹಲವು ದಶಕಗಳಿಂದ ಪ್ಯಾಲೆಸ್ಟೈನ್ ಮೇಲೆ ವಾಯು ದಾಳಿ ಕಾರ್ಯಾಚರಣೆ ನಡೆಸಿ ಇಲ್ಲಿಯವರೆಗೆ ಲಕ್ಷಾಂತರ ಪ್ಯಾಲೆಸ್ಟೈನ್ ನಾಗರಿಕರನ್ನು ಹತ್ಯೆ ಮಾಡಿದೆ.

 

ಪ್ಯಾಲೆಸ್ಟೈನ್ ರಾಷ್ಟ್ರದ ಪ್ರತಿರೋಧ ಗುಂಪು ಹಮಾಸ್ ಸಂಘಟನೆ ಅ.7, 2023 ರಂದು ನಡೆಸಿದ ದಾಳಿಯಲ್ಲಿ ಇಸ್ರೇಲ್’ನ ಸಾವಿರಾರು ನಾಗರಿಕರು ಹತರಾಗಿದ್ದರು. ಈ ದಾಳಿಯನ್ನು ಹಮಾಸ್ ಹಲವು ದಶಕಗಳಿಂದ ನಮ್ಮ ಮೇಲೆ ನಡೆಯುತ್ತಿರುವ ಅಸಹನೀಯ ದೌರ್ಜನ್ಯಕ್ಕೆ ಪ್ರತಿಕ್ರಿಯೆ ಎಂದು ಹೇಳಿಕೊಂಡಿತ್ತು. ಈ ಘಟನೆಯನ್ನು ಮುಂದಿಟ್ಟುಕೊಂಡು ಇಸ್ರೇಲ್ ಇಲ್ಲಿಯವರೆಗೆ ವೈಮಾನಿಕ ದಾಳಿ ನಡೆಸಿ ಅಸಹಾಯಕ ಮಕ್ಕಳು,ಮಹಿಳೆಯರು, ನಾಗರಿಕರನ್ನು ನೋಡದೆ ಸುಮಾರು 40 ಸಾವಿರಕ್ಕೂ ಅಧಿಕ ಜನರನ್ನು ಹತ್ಯೆ ಮಾಡಿದೆ, ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಹಮಾಸ್ ಮೇಲೆ ಅದರ ಸಿಟ್ಟಿದ್ದರೆ‌ ನೇರವಾಗಿ ಹಮಾಸ್ ಪಡೆಯನ್ನು ಗುರಿಯಾಗಿಸಬೇಕಿತ್ತು. ಈಗಾಗಲೇ ಹಮಾಸ್’ನ ಉನ್ನತ ನಾಯಕರನ್ನು ಇಸ್ರೇಲ್ ಕೊಂದಿದೆ. ಇಸ್ರೇಲ್ ಹೇಳುವಂತೆ ಅ. 7 ರ ಘಟನೆಯ ಮಾಸ್ಟರ್ ಮೈಂಡ್ ಯಹ್ಯಾ ಸಿನ್ವಾರ್ ಅವರನ್ನು ಕೂಡ ಇತ್ತೀಚೆಗೆ ನೆಲದ ಕಾರ್ಯಾಚರಣೆಯಲ್ಲಿ ಕೊಂದಿತ್ತು. ಅದರ ಹೊರತಾಗಿಯೂ ನಾಗರಿಕರ ಮೇಲೆ ದಾಳಿ ನಿಂತಿಲ್ಲ. ಆಸ್ಪತ್ರೆ, ಶಾಲೆಗಳ ಮೇಲೆ ದಾಳಿ ನಡೆಸಿ ಇಡೀ ವಿಶ್ವ ನಾಯಕರ ಬಾಯಲ್ಲಿ ಉಗಿಸಿಕೊಳ್ಳುತ್ತಿದೆ. ವಿಶ್ವಸಂಸ್ಥೆಯಂತೂ ಈ ಇಸ್ರೇಲ್ ಕ್ರಮವನ್ನು ನೇರವಾಗಿ ಖಂಡಿಸಿದೆ. ಇದರ ಪರಿಣಾಮವಾಗಿ ಯುಎನ್ ಸೆಕೆರಿಟರಿ ಜನರಲ್ ಅಂಟೊನಿಯೋ ಗುಟರೆಸ್ ಅವರಿಗೆ ಇಸ್ರೇಲ್ ರಾಷ್ಟ್ರ ಪ್ರವೇಶ ನಿರ್ಬಂಧಿಸಿದೆ.

 

ಈತನ್ಮಧ್ಯೆ ನಾವು ಅರಿತುಕೊಳ್ಳಬೇಕಾದ ಪ್ರಮುಖ ಅಂಶವೆಂದರೆ ಇಸ್ರೇಲ್ ಎಷ್ಟೇ‌ ಮುಂದುವರಿದರೂ, ತಾಂತ್ರಿಕವಾಗಿಯೂ ಬೆಳೆದಿದ್ದರೂ ಕೂಡ ಅಮೇರಿಕಾದ ಸಹಾಯವಿಲ್ಲದೆ ಈ ಯುದ್ಧದಲ್ಲಿ ಹೋರಾಡುವ ಶಕ್ತಿ ಉಳಿಯುತ್ತಿರಲಿಲ್ಲ. ಅಮೇರಿಕಾದ ದೊಡ್ಡ ದೊಡ್ಡ ಬಂಡವಾಳಶಾಹಿಗಳು ಯಹೂದಿಗಳು, ಅವರ ಬೆಂಬಲ ಇಲ್ಲದೆ ಅಮೇರಿಕಾಕ್ಕೂ ಅರ್ಥಿಕ ಹಿನ್ನಡೆ ಸ್ಪಷ್ಟ. ಇಸ್ರೇಲ್ ರಾಷ್ಟ್ರವನ್ನು ಮೊದಲು ಅಂಗೀಕರಿಸಿದ್ದು ಕೂಡ ಯುಎಸ್. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಸಂಬಂಧವು ಆರ್ಥಿಕ, ಕಾರ್ಯತಂತ್ರ ಮತ್ತು ಮಿಲಿಟರಿ ಅಂಶಗಳಲ್ಲಿ ಪರಸ್ಪರ ಲಾಭದಾಯಕ ಮೈತ್ರಿಯಾಗಿ ಬೆಳೆದಿದೆ. ಯುನೈಟೆಡ್ ಸ್ಟೇಟ್ಸ್ ಇಸ್ರೇಲ್ಗೆ ಬಲವಾದ ಬೆಂಬಲವನ್ನು ನೀಡುತ್ತಿರುವ ವಿಶ್ವದ ಬಲಿಷ್ಠ ರಾಷ್ಟ್ರ ಎಂಬುವುದನ್ನು ಮರೆಯಬಾರದು. ಹಾಗಾಗಿ ಅಮೇರಿಕಾ ವಿಶ್ವದ ಮುಂದೆ ಕದನ ವಿರಾಮ, ಶಾಂತಿ, ಮಾನವೀಯತೆಯ ಮಾತು ಆಡುತ್ತ ಇಸ್ರೇಲ್’ಗೆ ಬಹಿರಂಗವಾಗಿ “ಹಿಂಬಾಗಿಲಿನಿಂದ” ಸಹಾಯ ಮಾಡುತ್ತಿದೆ‌. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು, ಇತರ ರಾಷ್ಟ್ರಗಳ ದಾಳಿ ಹಿಮ್ಮೆಟ್ಟಿಸುವ ತಂತ್ರಜ್ಞಾನವನ್ನು ಧಾರೆಯೆರೆದು ನೀಡುತ್ತಿದೆ. ಇತ್ತೀಚೆಗೆ ಅಮೇರಿಕಾದ ಅಧ್ಯಕ್ಷ ಜೋಯ್ ಬಿಡೆನ್ ಇಸ್ರೇಲ್

 

ಪ್ರಧಾನಿ ನೆತಾಹ್ಯಾನೂಗೆ ಮಾನವೀಯ ನೆರವಿನ 50 ಟ್ರಕ್ಕ್ ಗಳು ಗಾಝಾ ಪ್ರವೇಶಕ್ಕೆ ಅನುಮತಿ ‌ನೀಡಬೇಕು ಇಲ್ಲದಿದ್ದರೆ ಶಸ್ತ್ರಾಸ್ತ್ರಗಳನ್ನು ನಿಗ್ರಹಿಸುವುದಾಗಿ ಸಣ್ಣ ಎಚ್ಚರಿಕೆ ನೀಡಿದ ತಕ್ಷಣ ಇಸ್ರೇಲ್ ಟ್ರಕ್ಕ್ ಗಳಿಗೆ ಅನುಮತಿ ನೀಡಿತ್ತು. ಇದರರ್ಥ ಸ್ಪಷ್ಟ ಅಮೇರಿಕಾ ಮೊಸಳೆ ಕಣ್ಣೀರು ಸುರಿಸುತ್ತ ಮಾನವ ಹಕ್ಕುಗಳ ಪ್ರತಿಪಾದಕನಂತೆ ನಟಿಸುವುದನ್ನು ಬಿಟ್ಟು ವಾಸ್ತವವಾಗಿ ಕದನ ವಿರಾಮಕ್ಕೆ ಮುಂದಾದರೆ ಇಸ್ರೇಲ್ ತಕ್ಷಣ ಕದನ ವಿರಾಮಕ್ಕೆ ಅಣಿಯಾಗಲಿದೆ. ಯಾಕೆಂದರೆ ಅಮೇರಿಕಾ ಎಂಬ ದೈತ್ಯ ರಾಷ್ಟ್ರದ ಸಹಾಯವಿಲ್ಲದೆ ಇಸ್ರೇಲ್ ಯುದ್ಧ ಗೆಲ್ಲಲು ಸಾಧ್ಯವೇ ಇಲ್ಲ ಎಂಬುವುದೂ ಅದಕ್ಕೂ ಚೆನ್ನಾಗಿ ಗೊತ್ತು!.

 

ಇತ್ತೀಚಿನ ಜೆರುಸ್ಲೇಮ್ ಪೋಸ್ಟ್ ವರದಿಯ ಪ್ರಕಾರ ಈಗಾಗಲೇ ಇಸ್ರೇಲ್ ಅರ್ಥಿಕ ಬಿಕ್ಕಟ್ಟಿಗೆ ಒಳಗಾಗಿದ್ದು ಸರಕಾರದ ವಿರುದ್ಧ ನಾಗರಿಕರಿಂದ ಆಕ್ರೋಶಗಳು ಹೊರಬಿದ್ದಿದೆ. ಇಸ್ರೇಲ್ ಶತ್ರು ರಾಷ್ಟ್ರಗಳಿಂದ ಬರುವ ರಾಕೆಟ್ ದಾಳಿ ಹಿಮ್ಮೆಟ್ಟಿಸುವ “ಐರಾನ್ ಡೋಮ್” ವ್ಯವಸ್ಥೆ ಸಹಿತ ಮೂರು ಹಂತದ ಡಿಫೆನ್ಸಿವ್ ಸಿಸ್ಟಮ್’ಗೆ ಲಕ್ಷಾಂತರ ಕೋಟಿ ವೆಚ್ಚ ಮಾಡುತ್ತಿದೆ. ರಾಷ್ಟ್ರದ ಬಜೆಟ್ ನಲ್ಲೂ ಯುದ್ಧದ ಶಸ್ತ್ರ ಖರೀದಿಗೆ ಬಹುಪಾಲು ನೀಡುತ್ತಿದೆ. ಅದರ ಹೊರತಾಗಿಯೂ ಡಿಫೆನ್ಸಿವ್ ತಂತ್ರಜ್ಞಾನಗಳ ವೈಫಲ್ಯ, ಇನ್ನೊಂದು ಕಡೆ ಒತ್ತೆಯಾಳುಗಳನ್ನು ಜೀವಂತವಾಗಿ ಬಿಡುಗಡೆಗೊಳಿಸಬೇಕೆಂಬ ಕುಟುಂಬಸ್ಥರ ಆಗ್ರಹ. ಅದಕ್ಕಾಗಿ ಕದನ ವಿರಾಮ ಘೋಷಿಸಲು ಇಸ್ರೇಲಿಗರ ಪ್ರತಿಭಟನೆ ಈ ಎಲ್ಲವೂ ಇಸ್ರೇಲ್ ಸರಕಾರಕ್ಕೆ ತಾಳಲಾಗದಷ್ಟು ಒತ್ತಡ ಸೃಷ್ಟಿಸಿದೆ.

 

ಇನ್ನೊಂದು ಕಡೆ ಗಾಝಾ, ಲೆಬನಾನ್, ಹೌತಿ ಬಂಡುಕೋರರ ಗುಂಪು, ಇರಾಕ್’ನಲ್ಲಿರುವ ಪ್ರೋಕ್ಸಿ ಸೇನೆ ಇರಾನಿನನ ಸಹಾಯದಿಂದ ಕಳೆದುಕೊಳ್ಳಲು ಏನೂ ಇಲ್ಲ ಎಂಬಂತೆ ಇಸ್ರೇಲ್ ಮೇಲೆ ಪ್ರತಿ ದಾಳಿ ನಡೆಸುತ್ತಿದೆ. ಈ ದಾಳಿಯಲ್ಲೂ ಇಸ್ರೇಲ್ ಈಗಾಗಲೇ 400 ಕ್ಕೂ ಅಧಿಕ ಸೈನಿಕರನ್ನು ಕಳೆದುಕೊಂಡು ಜರ್ಝರಿತವಾಗಿದೆ. ಇಸ್ರೇಲ್ ಸದ್ಯ ಅಮೇರಿಕಾ ಬೆಂಬಲದ ಕಾರಣ ಈ ಒತ್ತಡವನ್ನು ಇಲ್ಲಿಯವರೆಗೆ ನಿಭಾಯಿಸಿಕೊಂಡು ಬರುತ್ತಿದೆ..ಮುಂದೆ ಮಧ್ಯ ಪ್ರಾಚ್ಯದಲ್ಲಿ ಯಾವೆಲ್ಲ ಬೆಳವಣಿಗೆಗಳು ನಡೆಯವಹುದೆಂಬುವುದು ಸದ್ಯದ ಕುತೂಹಲ ಅಷ್ಟೇ..!

error: Content is protected !!