“ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭ”

ಚಿಂಚೋಳಿ : ಚಂದಾ ಪೂರದ ಬಾಲಕರ ಕಲಾ, ವಾಣಿಜ್ಯ, ವಿಜ್ಞಾನ ಸರಕಾರಿ ಪಿಯು ಕಾಲೇಜ ನಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಸಮಾರಂಭ ಮಾಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೋಲಾರ ಜಿಲ್ಲಾ ನಿಯೋಜಿತ ಡಿ. ಡಿ. ಪಿ. ಯು. ಅಶೋಕ ಭಾವಗೆ ಇಂದಿನ ಯುವಜನತೆ ಪುಸ್ತಕಕ್ಕೆ ಸೀಮಿತವಾಗಿದ್ದು, ಸಮಾಜದಲ್ಲಿನ ವಿಚಾರಗಳನ್ನು ಅರಿಯದೇ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿ ವಿಚಲಿತರಾಗುತ್ತಿದ್ದಾರೆ ಎಂದು ಹೇಳಿದರು.

ಆದರ್ಶ ವಿದ್ಯಾಲಯ ಚಿಂಚೋಳಿಯ ಶಿಕ್ಷಕರಾದ ಕಿಶನ ನಿಟ್ಟೂರಕರ್ ರವರು ಮನಸ್ಸಿನ ಆಕರ್ಷಣೆಗಳು ತಾತ್ಕಾಲಿಕವಾಗಿದ್ದು, ಅವುಗಳ ಹಿಂದೆ ಹೋದವರು ಜೀವನದಲ್ಲಿ ನೊಂದಿರುವ ನಿದರ್ಶನಗಳು ಹೆಚ್ಚಾಗಿವೆ. ಕಾಲೇಜು ಸಂದರ್ಭದಲ್ಲಿ ಉತ್ತಮ ಸ್ನೇಹ ಗಳಿಸಿಕೊಂಡು ಶೈಕ್ಷಣಿಕ ಪ್ರಗತಿ ಸಾಧಿಸಿದರೆ ಉತ್ತಮ ಜೀವನ ರೂಪಿಸಿಕೊಳ್ಳಬಹುದು ಎಂದರು. ರಾಚಯ್ಯಾ ಸ್ವಾಮಿ ಖಾನಾಪೂರ್ ರವರು ಹಾಸ್ಯ ಚಟಾಕಿಯ ಮೂಲಕ ವಿದ್ಯಾರ್ಥಿಗಳಿಗೆ ನಕ್ಕು ನಗಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಚಾರ್ಯ ಮಲ್ಲಿಕಾರ್ಜುನ ಪಾಲಾಮೂರ್, ನಮ್ಮ ಕಾಲೇಜು ರಾಜ್ಯದ ಉನ್ನತೀಕರಿಸಿದ ಆದರ್ಶ ಪಿಯು ಕಾಲೇಜುಗಳಲ್ಲಿ ಒಂದಾಗಿದೆ. ವಿಜ್ಞಾನ, ಕಂಪ್ಯೂಟರ್ ಸೈನ್ಸ್, ಕಲಾ, ವಾಣಿಜ್ಯ ವಿಭಾಗದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಹೆಸರಾಗಿದೆ. 500ಕ್ಕೂ ಹೆಚ್ಚು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದರು. ಕಾಲೇಜಿಗೆ ನೂತನವಾಗಿ ವರ್ಗವಣೆ ಆಗಿ ಬಂದ ಉಪನ್ಯಾಸಕರನ್ನು ಹಾಗೂ ಅತಿಥಿ ಸನ್ಮಾನಿಸಲಾಯಿತು. ವಿದ್ಯಾರ್ಥಿನಿ ರೇಖಾ ಸಂಗಡಿಗರು ಪ್ರಾರ್ಥಿಸಿದರು. ಉಪನ್ಯಾಸಕ ಹಣಮಂತ ಕೋರೆ ಸ್ವಾಗತಿಸಿದರು, ಡಾ.ಶಮಸೋದ್ದಿನ್ ವಂದಿಸಿದರು ಉಪನ್ಯಾಸಕ ಚಕ್ರವರ್ತಿ ನಿರೂಪಿಸಿದರು.