ಕಂದಾಯ ನೌಕರರ ಸೇವೆ ಅನನ್ಯ : ಪಾಟೀಲ್

ಔರಾದ್ : ಗ್ರಾಮೀಣ ಮಟ್ಟದಲ್ಲಿ ಜನರ ಸಮಸ್ಯೆಗೆ ಸ್ಪಂದಿಸುವ ಕಂದಾಯ ಇಲಾಖೆ ನೌಕರರ ಸೇವೆ ಮಹತ್ತರವಾಗಿದೆ ಎಂದು ತಹಸೀಲ್ದಾರ ಮಹೇಶ ಪಾಟೀಲ್ ಹೇಳಿದರು. ಪಟ್ಟಣದ ತಾಲೂಕು ವಿಧಾನಸೌಧ ಸಭಾಂಗಣದಲ್ಲಿ ಸೋಮವಾರ ಕಂದಾಯ ಇಲಾಖಾ ನೌಕರರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಸತ್ಕರಿಸಿ ಮಾತನಾಡಿದರು. ಇಲಾಖೆ ನೌಕರರಿಗೆ ಕೆಲಸ ಸಮಾಜ ಸೇವೆಯಾಗಬೇಕು. ಸರಕಾರಗಳ ಯಾವುದೇ ಹೊಸ ಯೋಜನೆಗಳನ್ನು ಜನರಿಗೆ ತಲುಪಿಸಿ, ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದು ಕಂದಾಯ ಇಲಾಖೆಯಿಂದ ಮಾತ್ರ ಸಾಧ್ಯ ಎಂದು ತಿಳಿಸಿದರು. ಎಷ್ಟೇ ಕಷ್ಟ ಎದುರಾದರು ಕಂದಾಯ ಇಲಾಖೆ ನೌಕರರು ಸಿಬ್ಬಂದಿ ಚುನಾವಣೆ ಮತ್ತು ಮಾದರಿ ನೀತಿ ಸಂಹಿತೆಯಂತಹ ತಮ್ಮ ಕರ್ತವ್ಯಗಳನ್ನು ಅತಿ ಜಾಗರೂಕತೆಯಿಂದ ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುತ್ತಿರುವುದು ಇಲಾಖೆಯ ದಕ್ಷತೆಗೆ ಹಿಡಿದ ಕನ್ನಡಿಯಾಗಿದೆ. ಕಂದಾಯ ಇಲಾಖೆಯ ನೌಕರರು ನ್ಯಾಯ ಬದ್ಧವಾದ ಸೇವೆಯನ್ನು ಜನರಿಗೆ ನೀಡಬೇಕು. ಯಾವುದೇ ಸಮಸ್ಯೆಗಳು ಬಂದರೆ ತ್ವರಿತ ಗತಿಯಲ್ಲಿ ಕೆಲಸ ಪೂರ್ಣ ಮಾಡುವ ಇಚ್ಛಾ ಶಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಕಂದಾಯ ಇಲಾಖಾ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಹುಲ್ ದೇವ ಪ್ರಸಾದ್ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಮಾಳಗೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಸಮ್ಮುಖದಲ್ಲಿ ರವಿಕಾಂತ ಬಂಬುಳಗೆ ಅವರನ್ನು ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಶೀರಸ್ಥೆದಾರ ಮಂಜುನಾಥ ಗೌರಾ, ಉಪಾಧ್ಯಕ್ಷರಾಗಿ ಪ್ರಶಾಂತ ನಿಲಂಗೆ ಅವಿರೋಧವಾಗಿ ಆಯ್ಕೆಯಾದರು.
ಪ್ರಮುಖರಾದ ಜಿಲ್ಲಾ ಘಟಕದ ಉಪಾಧ್ಯಕ್ಷ ಮಹಾಂತೇಶ ಕುಂಬಾರ, ನರಸಿಂಹಲು ತಲಾರಿ, ಸುಭಾಷ್ ಚವ್ಹಾಣ, ಅನಿಲ ತೆಲಗೂರ್, ಅಮಿತ್ ಕುಲಕರ್ಣಿ, ಪ್ರಭಾಕರ್ ಕುಂಬಾರ, ಸಂಗಮೇಶ ಬಿರಾದಾರ್, ಬಾಲಿಕಾ, ಅಶ್ವಿನಿ, ದೈವಶಾಲಾ, ನೀತಾದೇವಿ ಸೇರಿದಂತೆ ಅನೇಕರಿದ್ದರು.

ವರದಿ : ರಾಚಯ್ಯ ಸ್ವಾಮಿ

error: Content is protected !!