ಬೆಂಗಳೂರು : ನಗರ ಉತ್ತರ ವಿಭಾಗದ ಒಟ್ಟು 13 ಪೊಲೀಸ್ ಠಾಣಾ ಸರಹದ್ದುಗಳಲ್ಲಿ ದಿನಾಂಕ:02/08/2025 ರಂದು ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ವಿಶೇಷ ಕಾರ್ಯಾಚರಣೆ ನಡೆಸಿ, ಎಲ್ಲಾ ಪೊಲೀಸ್ ಠಾಣಾ ಸರಹದ್ದುಗಳಲ್ಲಿನ ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ ಮತ್ತು ಸ್ವತ್ತು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಹಾಗೂ ಅವೇಳೆಯಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಗಳನ್ನು ಅನಿರೀಕ್ಷಿತವಾಗಿ ಪರಿಶೀಲನೆ ಕೈಗೊಂಡು, ಒಟ್ಟು 180 ವ್ಯಕ್ತಿಗಳನ್ನು ಪರಿಶೀಲಿಸಲಾಗಿರುತ್ತದೆ. ಸದರಿ ವ್ಯಕ್ತಿಗಳ ಚಲನ ವಲನ, ಪ್ರಸ್ತುತ ನಿರ್ವಹಿಸುತ್ತಿರುವ ಕೆಲಸದ ಬಗ್ಗೆ ಮಾಹಿತಿ ಕಲೆಹಾಕಿ, ಸದರಿಯವರುಗಳ ವಿರುದ್ಧ ಈ ಹಿಂದೆ ದಾಖಲಾಗಿರುವ ಪ್ರಕರಣಗಳಲ್ಲಿ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ವಾರೆಂಟ್, ಪ್ರೋಕ್ಷಮೇಷನ್ ಆಗಿರುವ ಬಗ್ಗೆ ಪರಿಶೀಲನೆ ಮಾಡಿ, ನ್ಯಾಯಾಲಯದ ವಿಚಾರಣೆ ವೇಳೆ ತಪ್ಪದೇ ಹಾಜರಾಗಲು ಸೂಚಿಸಲಾಯಿತು.
ಮಾದಕ ವಸ್ತು ಮಾರಾಟ ಮಾಡುವವರ ವಿರುದ್ಧ 3 ಪ್ರಕರಣಗಳನ್ನು ದಾಖಲಿಸಿದ್ದು, ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು, 2 ಕೆ.ಜಿ 450 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. (ಮಲ್ಲೇಶ್ವರಂ, ಆರ್.ಟಿ.ನಗರ. ಮಹಾಲಕ್ಷ್ಮೀಲೇಔಟ್ ಪೊಲೀಸ್ ಠಾಣೆಗಳಲ್ಲಿ) ಅಲ್ಲದೇ ಮಾದಕ ವಸ್ತು ಸೇವನೆ ಮಾಡುತ್ತಿದ್ದ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ.
ಐವರು ಘೋಷಿತ ಅಪರಾಧಿ ವ್ಯಕ್ತಿಗಳನ್ನು ಮತ್ತು ಇಬ್ಬರು ವಾರೆಂಟ್ ಆರೋಪಿತರುಗಳನ್ನು ಪತ್ತೆ ಮಾಡಿ, ಅವರುಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. 10 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಯಿತು.
ಕೆ.ಪಿ ಆಕ್ಟ್ ಅಡಿಯಲ್ಲಿ ಹದಿನೆಂಟು ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಕೋಪ್ಪಾ ಕಾಯ್ದೆಯಡಿ 10 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಉಳಿದ ವ್ಯಕ್ತಿಗಳಿಗೆ ಯಾವುದೇ ರೀತಿಯ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಸೂಕ್ತ ಎಚ್ಚರಿಗೆ ನೀಡಲಾಗಿದೆ.
ಈ ಕಾರ್ಯಾಚರಣೆಯನ್ನು ಮಾನ್ಯ ಪೊಲೀಸ್ ಆಯುಕ್ತರು, ಬೆಂಗಳೂರು ನಗರ, ಮಾನ್ಯ ಜಂಟಿ ಪೊಲೀಸ್ ಆಯುಕ್ತರು, ಪಶ್ಚಿಮ, ಬೆಂಗಳೂರು ನಗರ ರವರುಗಳ ಮಾರ್ಗದರ್ಶನದಲ್ಲಿ ಶ್ರೀ ಬಿ.ಎಸ್. ನೇಮಗೌಡ, ಐ.ಪಿ.ಎಸ್. ಉಪ ಪೊಲೀಸ್ ಆಯುಕ್ತರು, ಉತ್ತರ ವಿಭಾಗ ರವರ ನೇತೃತ್ವದಲ್ಲಿ ಮೂರು ಉಪ-ವಿಭಾಗದ ಸಹಾಯಕ ಪೊಲೀಸ್ ಆಯುಕ್ತರುಗಳು, 13 ಪೊಲೀಸ್ ಠಾಣೆಗಳ ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳು, ಅಧಿಕಾರಿ ಮತ್ತು ಸಿಬ್ಬಂದಿಗಳು ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿರುತ್ತಾರೆ.
ವರದಿ : ಮುಬಾರಕ್