ಹುಕ್ಕೇರಿ : ಪಟ್ಟಣದ ರಸ್ತೆಗಳು ಎಷ್ಟು ದುರಸ್ತಿಯಲ್ಲಿವೆ ಎಂಬುದರ ನಿದರ್ಶನವಾಗಿ, ಇಲ್ಲಿ ದಿನದಿಂದ ದಿನಕ್ಕೆ ಜನಜೀವನ ಹದಗೆಡುತ್ತಿದೆ. ಪಟ್ಟಣ ಪುರಸಭೆ ವ್ಯಾಪ್ತಿಯ ಬಹುತೇಕ ರಸ್ತೆಗಳು ತಗ್ಗು ಗುಂಡಿಗಳಿಂದ ತುಂಬಿದ್ದು, ಸಾರ್ವಜನಿಕರು ದಿನನಿತ್ಯ ಪರದಾಡುತ್ತಿದ್ದಾರೆ.
ವಯಸ್ಸಾದವರಿಗೂ, ಶಾಲಾ ಮಕ್ಕಳಿಗೂ, ಬಡವರಿಗೂ ಇದು ಸಂಕಟಕಾರಿಯಾಗಿದ್ದು, ಮಳೆಗೆ ಅವಸ್ಥೆ ಇನ್ನಷ್ಟು ತೀವ್ರವಾಗಿದೆ. ಒಳಚರಂಡಿ ಕಾಮಗಾರಿಗಳ ನೆಪದಲ್ಲಿ ಪಟ್ಟಣದ ಹಲವು ರಸ್ತೆಗಳು ಹಾಳಾಗಿದ್ದು, ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರರು ಮತ್ತು ಸ್ಥಳೀಯ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಕ್ಷೇತ್ರ ಪ್ರತಿನಿಧಿ ಈ ಕಡೆ ಗಮನಹರಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.
ಪಟ್ಟಣದ ಹಲವೆಡೆ ಸರಿಯಾದ ಒಳಚರಂಡಿ ವ್ಯವಸ್ಥೆಯೂ ಇಲ್ಲ. ಇದರಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಸ್ವಚ್ಛತೆ ಇಲ್ಲದ ಹಿನ್ನೆಲೆಯಲ್ಲಿ ಹಂದಿಗಳ ಓಡಾಟ ಕೂಡಾ ಸಾರ್ವಜನಿಕರ ಜೀವಕ್ಕೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಇನ್ನೊಂದು ಕಡೆ, ಇಲ್ಲಿಯವರೆಗೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗಿಲ್ಲ ಎಂಬುದು ಗಂಭೀರ ಪ್ರಶ್ನೆಗೆ ಕಾರಣವಾಗಿದೆ. ಸಾವಿರಾರು ಜನರಿಗೆ ನೀರಿಗಾಗಿ ಅನಿವಾರ್ಯವಾಗಿ ಶುದ್ಧ ನೀರಿಗೆ ಹಣ ಖರ್ಚು ಮಾಡಬೇಕಾಗಿದೆ
ಹುಕ್ಕೇರಿ ಪಟ್ಟಣದ ವಿವಿಧ ಭಾಗಗಳಲ್ಲಿ ಸ್ಥಿತಿಗತಿಗಳು ಹೀಗೆ ದಿನದಿಂದ ದಿನಕ್ಕೆ ಹದಗೆಡುತ್ತಿರುವಾಗ, ಇನ್ನೊಂದು ವೈಷಮ್ಯಾತ್ಮಕ ವಿಷಯವೆಂದರೆ – ಇಲ್ಲಿನ ಹಲವಾರು ಸರ್ಕಾರಿ ಜಾಗಗಳು ಅಜ್ಞಾತವಾಗಿ ಮಾಯವಾಗುತ್ತಿವೆ. ಯಾರ ಪಾಲಾಗುತ್ತಿದೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಆತಂಕವಿದೆ.
ಜನತೆ ಇಚ್ಛಿಸುತ್ತಿರುವುದು ಒಂದೇ ಸಂಬಂಧಿತ ಅಧಿಕಾರಿಗಳು ಎಚ್ಚರಿಕೆಯಿಂದ ಜನರ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿ ಶಾಶ್ವತ ಪರಿಹಾರ ನೀಡಬೇಕಾಗಿದೆ.
ವರದಿ ಸದಾನಂದ ಎಂ