ಗೋಮಾಂಸ ಸೇವನೆ ಶಂಕೆ : ಸ್ವಯಂ ಘೋಷಿತ ಗೋರಕ್ಷಕರಿಂದ ಕಾರ್ಮಿಕನ ಥಳಿಸಿ ಹತ್ಯೆ

ಹರ್ಯಾಣದ ಚಾರ್ಖಿ ದಾದ್ರಿಯಲ್ಲಿ ಪಶ್ಚಿಮ ಬಂಗಾಳದ 26 ವರ್ಷದ ವಲಸೆ ಕಾರ್ಮಿಕನನ್ನು ಸ್ವಯಂ ಘೋಷಿತ ಗೋರಕ್ಷಕರ ಗುಂಪೊಂದು ಬರ್ಬರವಾಗಿ ಥಳಿಸಿ ಹತ್ಯೆ ಮಾಡಿದೆ ಎಂದು ದಿ ಹಿಂದೂ ವರದಿ ಮಾಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದ್ದು, ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ. ಅಭಿಷೇಕ್, ರವೀಂದರ್, ಮೋಹಿತ್, ಕಮಲಜೀತ್ ಮತ್ತು ಸಾಹಿಲ್ ಬಂಧಿತ ಗೋರಕ್ಷಕರ ತಂಡದ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.

ಸಾಬಿರ್ ಕೊಲೆಯಾದ ಅಸ್ಸಾಂನ ವಲಸಿಗ. ಈತನ ಗೆಳೆಯ ಅಸಿರುದ್ದೀನ್ ಮೇಲೂ ದುಷ್ಕರ್ಮಿಗಳು ದಾಳಿ ನಡೆಸಿದ್ದು, ಗಾಯಗೊಂಡಿರುವ ಆತ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಗೋಮಾಂಸ ಸೇವಿಸಿರುವ ಶಂಕೆಯ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಗುಜರಿ ವಸ್ತುಗಳನ್ನು ಬಸ್‌ ನಿಲ್ದಾಣಕ್ಕೆ ತಲುಪಿಸುವ ನೆಪದಲ್ಲಿ ಸಾಬಿರ್ ಮತ್ತು ಅಸಿರುದ್ದೀನ್ ಅನ್ನು ಕರೆದೊಯ್ದ ದುಷ್ಕರ್ಮಿಗಳು, ಅವರ ಹಲ್ಲೆ ನಡೆಸಿದ್ದಾರೆ. ಸುತ್ತಮುತ್ತಲಿದ್ದ ಜನರು ಮಧ್ಯ ಪ್ರವೇಶಿಸಿದಾಗ ಇಬ್ಬರನ್ನೂ ಬೈಕ್ ಹತ್ತಿಸಿ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿದ್ದಾರೆ.

ಬಳಿಕ ಭಂಡ್ವಾ ಗ್ರಾಮದ ಕಾಲುವೆಯ ಬಳಿ ಸಾಬಿರ್‌ನ ಶವ ಪತ್ತೆಯಾಗಿದೆ. ಅಸಿರುದ್ದೀನ್ ಗಾಯಗೊಂಡ ಸ್ಥಿತಿಯಲ್ಲಿ ಮತ್ತೊಂದು ಪ್ರದೇಶದಲ್ಲಿ ಪತ್ತೆಯಾಗಿದ್ದಾನೆ. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಚಾರ್ಖಿ ದಾದ್ರಿಯ ಪೊಲೀಸ್ ಅಧೀಕ್ಷಕಿ ಪೂಜಾ ವಶಿಷ್ಠ ಅವರು “ಆರೋಪಿಗಳು ಗೋರಕ್ಷಕ ಗ್ಯಾಂಗ್‌ಗೆ ಸೇರಿದವರು. ಇಬ್ಬರು ಯುವಕರು ಗೋಮಾಂಸ ಸೇವಿಸಿದ್ದಾರೆಂದು ಶಂಕಿಸಿ ಥಳಿಸಿದ್ದಾರೆ. ಗ್ಯಾಂಗ್ ಇಬ್ಬರ ಮೇಲೆ ಹಲ್ಲೆ ನಡೆಸುತ್ತಿದ್ದಾಗ ಮಧ್ಯಪ್ರವೇಶಿಸಿದ ಜನರು ತಡೆದಿದ್ದಾರೆ. ಅಲ್ಲದೆ, ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಆದರೆ, ಅವರು ಪೊಲೀಸರಿಗೆ ಮಾಹಿತಿ ನೀಡಿಲ್ಲ” ಎಂದು ತಿಳಿಸಿರುವುದಾಗಿ ದಿ ಹಿಂದೂ ತಿಳಿಸಿದೆ.

ಸಂತ್ರಸ್ತರ ಸಂಬಂಧಿ ಸುಜಾವುದ್ದೀನ್, ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಮೃತ ಸಾಬಿರ್‌ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

“ಗುಜರಿ ಮಾರಾಟ ಮಾಡುವ ನೆಪದಲ್ಲಿ ಕೆಲವರು ಬಂದು ನನ್ನ ಪತಿಯನ್ನು ಕರೆದುಕೊಂಡು ಹೋದರು ಎಂದು ನನ್ನ ಸಹೋದರಿಯಿಂದ ಕರೆ ಬಂದಿತ್ತು. ನಾನು ತಕ್ಷಣ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದೆ. ಅವರು ಹುಡುಕಾಡಿದಾಗ ಸಾಬಿರ್‌ ಕಾಲುವೆ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಪ್ರಕರಣ ದೂರುದಾರ ಸುಜಾವುದ್ದೀನ್ ಹೇಳಿರುವುದಾಗಿ ದಿ ಹಿಂದೂ ವರದಿ ಮಾಡಿದೆ.

 

ವರದಿ : ಸದಾನಂದ ಎಂ.ಹೆಚ್