بسم الله الرحمن الرحيم
ಆತ್ಮೀಯ ಬಾಪಾಗೆ,
ಅಸ್ಸಲಾಮು ಅಲೈಕುಮ್ ವ ರಹಮತುಲ್ಲಾಹಿ ವಾ ಬರಕಾತುಹೂ
ಸೌಖ್ಯವಾಗಿದ್ದೀರಾ ಎಂಬ ಪ್ರಶ್ನೆ ಪ್ರಸ್ತುತವಲ್ಲ! ಜೈಲಿನಲ್ಲಿ ಯಾವ ಸೌಖ್ಯ?! ಕಳೆದ ಎರಡು ವರ್ಷಗಳಿಂದ ಯಾವುದೇ ಒಳ್ಳೆಯ ಸುದ್ದಿ ಕೇಳಿಬಂದಿಲ್ಲ. ವೀಡಿಯೊ ಸಂದರ್ಶನದಲ್ಲಿ ಮಾತನಾಡಿದ ನಂತರ ಯಾರೋ ನಿಮ್ಮನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ಯುವುದನ್ನು ನಾವು ಕೊನೆಯದಾಗಿ ನೋಡಿದ್ದೇವೆ! ನಿಮ್ಮ ಅನ್ಯಾಯದ ಬಂಧನದಿಂದ ಎಷ್ಟು ದಿನವಾಗಿದೆ ಎಂದು ನಿಮಗೆ ನೆನಪಿದೆಯೇ? 782 ದಿನಗಳು! 22ನೇ ಸೆಪ್ಟೆಂಬರ್ 2022 ರಂದು ನಿಮ್ಮನ್ನು NIA ಬಂಧಿಸಿ ಕರೆದೊಯ್ದಾಗ, ನೀವು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಿರಿ, ಕಳೆದ ಎರಡು ವರ್ಷಗಳಲ್ಲಿ ಅದು ಹತ್ತು ಪಟ್ಟು ಹೆಚ್ಚಾಗಿದೆ.
ಆ ದಿನ, ಅತ್ಯಂತ ಅಪಾಯಕಾರಿ ಹೊಟ್ಟೆಯ ಕ್ಯಾನ್ಸರ್‌ಗೆ ದೊಡ್ಡ ಶಸ್ತ್ರಚಿಕಿತ್ಸೆ ಮತ್ತು ನಂತರದ ಚಿಕಿತ್ಸೆಗೆ ಒಳಗಾಗಿ ಅದರ ಬಳಲಿಕೆಯಲ್ಲಿದ್ದಿರಿ ಮತ್ತು ದೇಹದ ಸಮತೋಲನವನ್ನು ಕಳೆದುಕೊಳ್ಳುವ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದಿರಿ, ಆದರೂ ನೀವು ಅದಕ್ಕಿಂತಲೂ ಅಪಾಯಕಾರಿ NIA ಅಧಿಕಾರಿಗಳೊಂದಿಗೆ ನಡೆದು ಕೊಂಡೆ ಹೋದಿರಿ. ಇಂದು, ಗಾಲಿಕುರ್ಚಿಯಲ್ಲಿ!
ಹೃದಯ ಸಮಸ್ಯೆಗಳು ಇನ್ನೂ ನಿಮ್ಮನ್ನು ಕಾಡುತ್ತಿವೆಯೇ? ಪ್ರೆಶರ್ ಮತ್ತು ಶುಗರ್ ಜಾಸ್ತಿಯಾಗಿದೆ ಎಂದು ಹೇಳಿದ್ದಿರಿ… ಒಳ್ಳೆಯ ಚಿಕಿತ್ಸೆ ಒದಗಿಸುವುದು ಹೇಗೆ? ಡಯಾಬಿಟಿಕ್ ರೆಟಿನೋಪತಿಗೆ ಇಂಜೆಕ್ಷನ್ ತೆಗೆದುಕೊಳ್ಳುವುದು ನಿಂತು ಹೋಗಿದೆ. ನಿಮ್ಮ ದೃಷ್ಟಿ ಈಗ ಮಂಕಾಗಿದೆಯೇ? ನನ್ನ ಈ ಪತ್ರವನ್ನು ನೀವು ಹೇಗೆ ಓದುತ್ತೀರಿ? ಪ್ರಾಸ್ಟೇಟ್ ಉರಿಯೂತದಿಂದ ತೊಂದರೆಯಾಗಿದೆಯೇ? ಇಷ್ಟೆಲ್ಲಾ ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿರುವಾಗಲೂ ಜಾಮೀನು ಸಿಗದಂತೆ ಕೋರ್ಟಿನಲ್ಲಿ ತನಿಖಾ ಸಂಸ್ಥೆ ಎಷ್ಟು ಕ್ರೂರ ಸುಳ್ಳುಗಳನ್ನು ಹೇಳುತ್ತಿದೆ?! ನ್ಯಾಯಾಲಯಗಳೂ ಕಣ್ಣು ತೆರೆಯದಾಯಿತೇ? ನ್ಯಾಯ ಎಲ್ಲಿದೆ?
ಬಾಪಾ….ನಾನೂ ನಿಮ್ಮಂತೆ ಮಾರಣಾಂತಿಕ ಕ್ಯಾನ್ಸರ್ ನಿಂದ ಬಳಲುತ್ತಿದ್ದೇನೆ. ನಾನು ನಿಮಗೆ ಕರೆ ಮಾಡಿದಾಗ ಹೇಳಿದ್ದೆ ತಾನೆ. ಶಸ್ತ್ರಚಿಕಿತ್ಸೆ ಮುಗಿದಿದೆ. ಈಗ ಕೀಮೋಥೆರಪಿ ಚಿಕಿತ್ಸೆ ನಡೆಯುತ್ತಿದೆ. ಅದರ ವಿವಿಧ ತೊಂದರೆಗಳನ್ನು ಎದುರಿಸುತ್ತಿದ್ದೇನೆ. ಮತ್ತು ಔಷಧದ ಅಡ್ಡಪರಿಣಾಮಗಳಿಂದಾಗಿ ಉಂಟಾಗುವ ಅಲರ್ಜಿಯಿಂದಾಗಿ ಆಗಾಗ್ಗೆ ತುರ್ತು ವಿಭಾಗಕ್ಕೆ ಸೆರಿಸಾಲಾಗುತ್ತಿದೆ. ಕಣ್ಣು ತುಂಬಾ ಮಂಕಾಗಿದೆ. ನನ್ನ ಚಿಕಿತ್ಸೆಯು ಈ ಹಿಂದಿನ ಜುಲೈನಲ್ಲಿ ಪ್ರಾರಂಭವಾಯಿತು, ಇದು ಕೀಮೋಥೆರಪಿ, ವಿಕಿರಣ ಇತ್ಯಾದಿಗಳೊಂದಿಗೆ ಮುಂದಿನ ಜುಲೈ ವರೆಗೆ (ಜುಲೈ 2025) ಇರುತ್ತದೆ. ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಸಾಮೀಪ್ಯವನ್ನು ನಾನು ಬಯಸುತ್ತೇನೆ.
ಬಾಪಾ…ಕೊನೆಯ ಕೀಮೋಗೆ ಅಡ್ಮಿಟ್ ಆದಾಗ ನೀವು ಇದ್ದ ರೂಂನಲ್ಲೇ ನನಗೆ ಸಿಕ್ಕಿದ್ದು. ರೂಮ್ ನಂಬರ್ 1313. ಆ ಮೂಲೆಯಲ್ಲಿದ್ದ ದೊಡ್ಡ ರೂಮ್. ಶಸ್ತ್ರಚಿಕಿತ್ಸೆ ಮುಗಿದು ನೀವು ಬಳಲಿ ಮಲಗಿದ್ದ ದೃಶ್ಯ ನೆನಪಾಯಿತು. ಎಷ್ಟು ದೊಡ್ಡ ಸರ್ಜರಿ. ದೇಹದ ವಿವಿಧ ಭಾಗಗಳಲ್ಲಿ ಒಂಬತ್ತು ಕೊಳವೆಗಳು! ಗಂಟಲಿನಿಂದ ಹೊಕ್ಕುಳಕ್ಕೆ ಉದ್ದವಾದ ಗಾಯ ಮತ್ತು ಕೀಮೋದ ಬಳಲುವಿಕೆ! ಆ ಸಮಯದಲ್ಲಿ ನೀವು ಆಯಾಸ ಮತ್ತು ನೋವಿನ ಬಗ್ಗೆ ಹೇಳಿದಾಗ, ನನ್ನ ಕಲ್ಪನೆಯಲ್ಲಿ ಗರಿಷ್ಠ ಆಯಾಸ ಮತ್ತು ನೋವು ಇತ್ತು, ಕ್ಯಾನ್ಸರ್‌ನ ನೋವು ಮತ್ತು ಕಷ್ಟವು ಕಲ್ಪನೆಗೆ ಮೀರಿದೆ ಎಂದು ನನಗೆ ಅನುಭವದ ಮೂಲಕ ತಿಳಿಯಿತು.
ಬಾಪಾ… ಎನ್‌ಐಎ ನಿಮ್ಮ ವಿರುದ್ಧ ಏನೆಲ್ಲಾ ಕಟ್ಟುಕಥೆಗಳನ್ನು ಸೃಷ್ಟಿಸಿದೆ? ಅವರ ಮನಸ್ಸಿನಲ್ಲಿ ತೋಚಿದ್ದನ್ನೆಲ್ಲಾ ಬರೆದಿದ್ದಾರೆ. ನ್ಯಾಯಾಲಯಕ್ಕೆ ಸಲ್ಲಿಸಿದ ಚಾರ್ಜ್ ಶೀಟ್‌ನಲ್ಲಿ ವಿರಾಮಚಿಹ್ನೆ, ಅಲ್ಪವಿರಾಮ ಮತ್ತು ಅರೆ ಕಾಲನ್‌ಗಳ ಹೊರತಾಗಿ ಇನ್ನೇನು ನಿಜವಿದೆ! ಕಟ್ಟುಕಥೆಗಳಿಗೆ ಪೂರ್ಣವಿರಾಮ ಇರುವುದಿಲ್ಲ ತಾನೆ…
2047 ರಲ್ಲಿ, ನೀವು ಭಾರತದಲ್ಲಿ ಇಸ್ಲಾಮಿಕ್ ರಾಜ್ಯವನ್ನು ಸ್ಥಾಪಿಸಲು ದಕ್ಷಿಣ ಭಾರತದಿಂದ ಉತ್ತರ ಭಾರತಕ್ಕೆ ಖಡ್ಗ ಹಿಡಿದು ಮಿಲಿಟರಿ ಮಾರ್ಚ್ ನಡೆಸಲು ಪ್ರಯತ್ನಿಸಿದಿರಂತೆ! ನನ್ನ ತಂದೆಯ ಬುದ್ಧಿವಂತಿಕೆ ಮತ್ತು ವಿವೇಚನಾ ಶಕ್ತಿಯನ್ನು ಇಷ್ಟು ಕಡಿಮೆ ಅಂದಾಜು ಮಾಡಿದ್ದಕ್ಕಾಗಿ ನನಗೆ ನೋವಾಯಿತು! ಕಟ್ಟುಕಥೆಗಳಿಗೂ ಬೇಡವೇ ಒಂದು ಮಿನಿಮಂ ಯುಕ್ತಿ!
ಕಳೆದ 30 ವರ್ಷಗಳಿಂದ ಹೋದಲ್ಲೆಲ್ಲಾ “ಸಾರೇ ಜಹಾಂ ಸೇ ಅಚಾ ಹಿಂದೂಸ್ತಾನ್ ಹಮಾರಾ” ಎಂದು ಹಾಡುತ್ತಿದ್ದವರು, ಹಾಡಿಸಿದವರು ಯಾವಾಗಿನಿಂದ ದೇಶದ್ರೋಹಿಗಳಾದರು?! ಪಾಪ್ಯುಲರ್ ಫ್ರಂಟ್ ಬಗ್ಗೆ ನನಗೆ ಹೆಚ್ಚು ತಿಳಿದಿಲ್ಲವಾದರೂ, ನಮ್ಮ ಮಾತುಕತೆಯ ಸಮಯದಲ್ಲಿ ನೀವು ಹಂಚಿಕೊಂಡ ಅನುಭವಗಳ ಮೂಲಕ ನೀವು ಮಂಡಿಸಿದ ವಿಚಾರಗಳನ್ನು ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ನೀವು ಒಮ್ಮೆ ಹಂಚಿಕೊಂಡ ಅನುಭವ ನನಗೆ ನೆನಪಿದೆ; ಸಭೆಯೊಂದರಲ್ಲಿ ಒಬ್ಬರು ನಿಮ್ಮಲ್ಲಿ, ರಿಹ್ಯಾಬ್ ಒದಗಿಸಿದ ಆರ್ಥಿಕ ಸಹಾಯವನ್ನು ಮುಸ್ಲಿಮೇತರರಿಗೆ ನೀಡಲಾಗುವುದೇ ಎಂದು ಕೇಳಿದರು, “ಮುಸ್ಲಿಮರಿಗೂ ನೀಡುವುದಿಲ್ಲ” ಎಂದು ನೀವು ಉತ್ತರಿಸಿದಿರಿ.,”ಇಡೀ ಪ್ರೇಕ್ಷಕರು ನಿಮ್ಮತ್ತ ವಿವರಣೆಗಾಗಿ ಆಶ್ಚರ್ಯದಿಂದ ನೋಡಿದರು.” “ಅಗತ್ಯವಿರುವವರಿಗೆ ಮಾತ್ರ” (for the needy people only) ಎಂಬುದು ನಿಮ್ಮ ಉತ್ತರ, ಹಸಿವು, ಬಡತನ ಮತ್ತು ರೋಗಗಳಿಗೆ ಯಾವುದೇ ಧರ್ಮ ಅಥವಾ ಜಾತಿ ಇಲ್ಲ, ಹಿಂದೂ ಕ್ಯಾನ್ಸರ್, ಹಿಂದೂ ಹಸಿವು ಮತ್ತು ಮುಸ್ಲಿಂ ಹಸಿವು ಇದೆಯೇ? ರೋಗವು ರೋಗ ಮತ್ತು ಹಸಿವು ಹಸಿವೇ ಆಗಿದೆ. ಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನರು, ಸಿಖ್ಖರು, ದಲಿತರು ಮತ್ತು ಆದಿವಾಸಿಗಳು ಕಲಹ ಮತ್ತು ಗಲಭೆಗಳಿಲ್ಲದೆ ಸಹೋದರತ್ವದಿಂದ ಬದುಕುವ ಸಹಿಷ್ಣು ಭಾರತವಾಗಿದೆ ನಿಮ್ಮ ಪರಿಕಲ್ಪನೆ ಎಂದು ಅಲ್ಲಿ ವಿವರಿಸಿದಿರಿ … ಹೀಗಿದ್ದೂ ಅವರು ನಿಮ್ಮನ್ನು ಹೇಗೆ ಮತ್ತು ಏಕೆ ಹಿಂದೂ ವಿರೋಧಿಯನ್ನಾಗಿ ಕಥೆಗಳನ್ನು ಕಟ್ಟುತ್ತಾರೆ!!?
ಬಾಪಾ.. ನಿಮ್ಮನ್ನು ನೋಡಲು ತುಂಬಾ ಆಸೆ ಇದೆ. ಆದರೆ ನನ್ನ ಆರೋಗ್ಯದ ಸ್ಥಿತಿ ತುಂಬಾ ಕೆಟ್ಟದಾಗಿದೆ. ಇನ್ನೂ ದೀರ್ಘ ಕಾಲ ಚಿಕಿತ್ಸೆ ಮುಂದುವರಿಯಲಿದೆ. ನಿಮ್ಮನ್ನು ನೋಡಲು ದೀರ್ಘ ಪ್ರಯಾಣ ಮಾಡಿದರೆ ಅದು ಇಂಫೆಕ್ಷನ್‌ಗೆ ಕಾರಣವಾಗಬಹುದು.
ನಿಮ್ಮನ್ನು ಭೇಟಿಯಾಗಲು ಮತ್ತು ನಿಮ್ಮನ್ನು ಅಪ್ಪಿಕೊಳ್ಳಲು ಇದರಿಂದ ನಾನು ನನ್ನ ಕಷ್ಟಗಳು ಮತ್ತು ನೋವುಗಳಿಂದ ಮುಕ್ತನಾಗಲು ಮತ್ತು ಗುಣಪಡಿಸಲು ಮತ್ತು ನಮ್ಮ ಈ ಕಾಯಿಲೆಯಲ್ಲಿ ನಾವು ಒಟ್ಟಿಗೆ ಇರಲು, ಸರ್ವಶಕ್ತ ಮತ್ತು ಕರುಣಾಮಯಿ ಭಗವಂತ ಒಂದು ಮಾರ್ಗವನ್ನು ತೋರಿಸುತ್ತಾನೆ ಎಂಬ ನಂಬಿಕೆಯೊಂದಿಗೆ … ಪ್ರಾರ್ಥನೆಯೊಂದಿಗೆ..
ಕೊನೆಯದಾಗಿ ಒಂದು ವಿಷಯ…
ಬಾಪಾ…. ಕ್ಯಾನ್ಸರಿನಿಂದ ಅಸಹನೀಯವಾದ ನೋವಿನ ಅಂಚಿನಲ್ಲಿರುವಾಗ ನಾನು ಹೊಲಿದ ಚೀಲವನ್ನು ನಾನು ನಿಮಗೆ ಕಳುಹಿಸಿದ್ದೇನೆ, ಅದು ನನ್ನ ನೋವಿನಿಂದ ಎಳೆದ ಸೂಜಿ ಮತ್ತು ಕಣ್ಣಿರಿನಿಂದ ಪೊಣಿಸಿದ ದಾರದಿಂದ ಮಾಡಿದ್ದಾಗಿದೆ. ನನಗೆ ಒಂದು ವಿನಂತಿ ಇದೆ, ದಯವಿಟ್ಟು ಅದಕ್ಕೆ ಮುತ್ತು ನೀಡಿ! ಹಾಗಿದ್ದರೆ ನನ್ನ ಪ್ರಯತ್ನ ಸಾರ್ತಕವಾದೀತು.
ಬಾಪಾಲ ಲೀನು…
ಲೀನ ತಬಸುಂ.